ಭಿಲ್ಲಮ
 	ಸೇವುಣ ವಂಶದ ರಾಜರು. ಅವರಲ್ಲಿ ಇದೇ ಹೆಸರಿನ ಕೆಲವರನ್ನು ಇಲ್ಲಿ ಕೊಟ್ಟಿದೆ.

	ಭಿಲ್ಲಮ 1 : ಈತ ರಾಜ ಧಡಿಯಪ್ಪನ ಮಗ. ಕಾಲ ಸಮಾರು ಹತ್ತನೆಯ ಶತಮಾನದ ಆದಿಭಾಗ.

	ಭಿಲ್ಲಮ 2 : ವಡ್ಡಿಗನ ಮಗ. ಚಾಳುಕ್ಯ ತೈಲಪನ ಸಾಮಂತನಾಗಿದ್ದ ಸುಮಾರು (975-1000). ಪರಮಾರ ಮುಂಜನ ಮೇಲೆ ಮಾಡಿದ ಯುದ್ಧದಲ್ಲಿ ತೈಲಪನಿಗೆ ಈತ ಸಹಾಯ ಮಾಡಿದ. ಇದರಿಂದ ಸಂತೋಷಗೊಂಡ ತೈಲಪ ಇವನಿಗೆ ಮಹಾಸಾಮಂತನೆಂಬ ಬಿರುದನ್ನೂ ಅಹಮದ್‍ನಗರದ ಸುತ್ತಮುತ್ತಲ ಪ್ರದೇಶಗಳನ್ನೂ ಕೊಟ್ಟ. ಸೇವುಣ ರಾಜ್ಯಕ್ಕೆ ಬುನಾದಿಯನ್ನು ಹಾಕಿದ ಕೀರ್ತಿ ಈತನದು. ಲಚ್ಚಿಯವ್ವ ಈತನ ಪತ್ನಿ.

	ಭಿಲ್ಲಮ 3 : ವೇಸುಗಿಯ ಮಗ. ಚಾಳುಕ್ಯ ಸಾಮಂತ (ಸುಮಾರು 1025-55). ಚಾಳುಕ್ಯ ದೊರೆ ಆಹವಮಲ್ಲ ಸೋಮೇಶ್ವರನ ಸಹೋದರಿಯೂ ಜಯಸಿಂಹನ ಪುತ್ರಿಯೂ ಆದ ಅವ್ವಲದೇವಿಯನ್ನು ವಿವಾಹವಾಗಿದ್ದ.

	ಭಿಲ್ಲಮ 4 : ಈತನ ವಿಷಯ ಅಷ್ಟೇನೂ ತಿಳಿದುಬಂದಿಲ್ಲ.

	ಭಿಲ್ಲಮ 5 : (ಸುಮಾರು 1173-92). ಮಲ್ಲುಗಿಯ ಮಗ. ಇವನ ತಂದೆ ಕರ್ಣ. ಮಲ್ಲುಗಿ ಇವನ ತಾತ ಎಂಬ ಅಭಿಪ್ರಾಯವೂ ಇದೆ. ಈತ ತನ್ನ ದಾಯಾದಿಗಳನ್ನು ಸೋಲಿಸಿ ರಾಜ್ಯವನ್ನು ತನ್ನದಾಗಿ ಮಾಡಿಕೊಂಡ. ಇವನ ಶಾಸನಗಳು 1187ರಿಂದ ಕಾಣಬರುತ್ತವೆ. ಆದರೆ 1183ರಿಂದಲೇ ರಾಜನಾಗಿದ್ದನೆಂದು ತಿಳಿಸುವ ಶಾಸನಗಳೂ ದೊರಕಿವೆ.

	ಇವನು ರಾಜ್ಯಕ್ಕೆ ಬಂದ ಸಮಯದಲ್ಲಿ ಚಾಳುಕ್ಯ ನಾಲ್ಕನೆಯ ಸೋಮೇಶ್ವರನ ಪ್ರಾಬಲ್ಯ ಕಡಿಮೆಯಾಗಿ ಹೊಯ್ಸಳರು ಸ್ವತಂತ್ರರಾಗಲು ಹವಣಿಸುತ್ತಿದ್ದರು. ಇದೇ ಸಮಯದಲ್ಲಿ ಭಿಲ್ಲಮನೂ ಹೊಂಚು ಹಾಕುತ್ತಿದ್ದ. ಭಿಲ್ಲಮನಿಗೂ ಚಾಳುಕ್ಯರಿಗೂ ಕುಪ್ಪ ಎಂಬಲ್ಲಿ ಯುದ್ಧ ನಡೆಯಿತು. ಅನಂತರ ಇವನು ಹೊಯ್ಸಳ ಇಮ್ಮಡಿ ಬಲ್ಲಾಳ ಕಲ್ಯಾಣನಗರವನ್ನು ತನ್ನ ವಶಮಾಡಿಕೊಳ್ಳುವುದನ್ನು ತಪ್ಪಿಸಲು ಅವನೊಡನೆ ಯುದ್ಧ ಮಾಡಿದ. ಈ ಯುದ್ಧದಲ್ಲಿ ಭಿಲ್ಲವ ಬಲ್ಲಾಳನನ್ನು ಸೋಲಿಸಿ ಕಲ್ಯಾಣವನ್ನು ಪಡೆದ. ಬಲ್ಲಾಳ ಸೋತು ಹಿಂತಿರುಗಲು ಭಿಲ್ಲಮನು ಉತ್ತರ ಕರ್ನಾಟಕದ ಬಹುಭಾಗಗಳನ್ನು ತನ್ನ ವಶಮಾಡಿಕೊಂಡು 1189ರ ವೇಳೆಗೆ ಬಲು ಪ್ರಭಾವಿಯಾದ. ಇದನ್ನು ಸಹಿಸದ ಬಲ್ಲಾಳ 1191ರಲ್ಲಿ ಭಿಲ್ಲಮನ ಮೇಲೆ ಸೊರಟೂರು ಎಂಬಲ್ಲಿ ಯುದ್ಧ ಮಾಡಿದ. ಈ ಘೋರ ಯುದ್ಧದಲ್ಲಿ ಹೊಯ್ಸಳರು ಜಯಶಾಲಿಗಳಾದರು. ಸೇವುಣ ಸೈನ್ಯ ಸೋತು ಲೊಕ್ಕಿಗುಂಡಿಗೆ ಓಡಿಹೋಯಿತು. ಬಲ್ಲಾಳ 1192ರಲ್ಲಿ ಲೊಕ್ಕಿಗುಂಡಿಯನ್ನೂ ತನ್ನ ವಶಮಾಡಿಕೊಂಡ. ಭಿಲ್ಲಮ ಪೂರ್ಣವಾಗಿ ಸೋತ. ಭಿಲ್ಲಮ ಈ ಯುದ್ಧದಲ್ಲಿ ಬಲ್ಲಾಳನಿಂದ ಹತನಾದ ಎಂದು ಕೆಲವರ ಅಭಿಪ್ರಾಯ. ಆದರೆ ಅನಂತರವೂ ಈತ ಜೀವಿಸಿದ್ದನೆಂದು ಹೇಳಲು ಆಧಾರಗಳಿವೆ.

	ಭಿಲ್ಲಮ ಕೊನೆಯಲ್ಲಿ ಹೊಯ್ಸಳರಿಂದ ಸೋತರೂ ಈ ಹಿಂದೆ ಹಲವು ವಿಜಯಗಳನ್ನು ಸಾಧಿಸಿದ್ಧ. ಕಳಚುರಿ ದೊರೆ ವೀರ ಬಿಜ್ಜಳನ ಮಗ ಮೈಲುಗಿಯನ್ನು ಬಗ್ಗಿಸಿದ. ಮಂಗಳ ವೇಷ್ಟಕದ ರಾಜನಾದ ಬಿಲ್ಲಣ್ಣನನ್ನು (ಪ್ರಾಯಶಃ ಕಳಚುರಿ ವಂಶದ ವೀರ ಬಿಜ್ಜಳ) ಭಿಲ್ಲಮ ಕೊಂದನೆಂದು ಹೇಮಾದ್ರಿಯ ರಾಜ ಪ್ರಶಸ್ತಿ ತಿಳಿಸುತ್ತದೆ. ಪುಣೆಯ ಸಮೀಪದಲ್ಲಿರುವ ಅಂಸಲ ರಾಜ್ಯದ ರಾಜನನ್ನು ಸೋಲಿಸಿ ಅವನಿಂದ ಶ್ರೀವರ್ಧನ ಎಂಬ ನಗರವನ್ನು ವಶಮಾಡಿಕೊಂಡಿದ್ದ. ಪ್ರತ್ಯಾಂಡಕ ರಾಜನ ಮೇಲೂ ಭಿಲ್ಲಮ ವಿಜಯಿಯಾಗಿದ್ದ. ತನ್ನ ಸೇನಾಧಿಪತಿ ಬಿಲ್ಲನ ಸಹಾಯದೊಡನೆ ಮಾಳವ ದೇಶಕ್ಕೆ ನುಗ್ಗಿ ಅಲ್ಲಿಯ ದೊರೆಯನ್ನು ಸೋಲಿಸಿದ್ದ. ಚಾಳುಕ್ಯ ಎರಡನೆಯ ಭೀಮನನ್ನೂ ಸೋಲಿಸಿ ಉತ್ತರ ದಿಕ್ಕಿನಲ್ಲಿಯೂ ತನ್ನ ಪ್ರಭಾವವನ್ನು ಬೀರಿದ್ದ. ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗಗಳು ಭಿಲ್ಲಮನ ಆಳ್ವಿಕೆಗೆ ಒಳಪಟ್ಟಿದ್ದುವು. ಇವನು ದೇವಗಿರಿ ನಗರವನ್ನು ನಿರ್ಮಿಸಿ ಅದನ್ನು ಸೇವುಣರ ರಾಜಧಾನಿಯಾಗಿ ಮಾಡಿದ. 

	ಈತ ಶೈವ ದೇವಾಲಯಗಳಿಗೆ ಅನೇಕ ದತ್ತಿಗಳನ್ನೂ ಕೊಟ್ಟಿದ್ದ. ಈತ ಶೂರ, ಧೀರ, ಸಾಹಸಿ. ಸಾಮಂತರಾಗಿದ್ದ ಸೇವುಣರನ್ನು ಸ್ವತಂತ್ರರನ್ನಾಗಿ ಮಾಡಿದ ಕೀರ್ತಿ ಈತನದು. 

	ಭಿಲ್ಲಮ 1192ರಲ್ಲಿ ಮರಣ ಹೊಂದಿದನೆಂದೂ ಅನಂತರ ಇವನ ಮಗ ಜೈತುಗಿ ದೊರೆಯಾದನೆಂದೂ ತಿಳಿದುಬರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ